ಜಬಲ್‍ಪುರ
ಮಧ್ಯ ಪ್ರದೇಶ ರಾಜ್ಯದ ಒಂದು ನಗರ, ಜಿಲ್ಲೆ, ವಿಭಾಗ, ಜಬಲ್‍ಪುರ ನಗರ ಅಲಹಾಬಾದಿಗೆ ಆಗ್ನೇಯಕ್ಕೆ 312 ಕಿ.ಮೀ. ದೂರದಲ್ಲಿ ಮುಂಬಯಿ-ಅಲಹಾಬಾದ್-ಕಲ್ಕತ್ತ ಮತ್ತು ಜಬಲ್‍ಪುರ-ಗೋಂಡಿಯ ರೈಲು ಮಾರ್ಗಗಳ ಸಂಧಿಸ್ಥಳದಲ್ಲಿ ಇದೆ. ಮಧ್ಯಪ್ರದೇಶ ರಾಜ್ಯದ ಎರಡನೆಯ ದೊಡ್ಡ ನಗರವಾದ ಇದರ ಜನಸಂಖ್ಯೆ 4,42,481 (1971). ಇದರ ಸುತ್ತಣ ವಸತಿಗಳನ್ನೂ ಪರಿಗಣನೆಗೆ ತೆಗೆದುಕೊಂಡರೆ ಒಟ್ಟು ಜನಸಂಖ್ಯೆ 5.34.845.

	ನರ್ಮದಾ ನದಿಗೆ 8 ಕಿ.ಮೀ. ಉತ್ತರದಲ್ಲಿರುವ ಈ ನಗರದ ಸನ್ನಿವೇಶ ಬಹಳ ಮಹತ್ತ್ವದ್ದು. ಇದು ಪಶ್ಚಿಮದ ನರ್ಮದಾ ಕಣಿವೆ. ದಕ್ಷಿಣದ ಮಹದೇವ-ಮೈಕಲ್ ಘಾಟಿ, ಭಾನ್ರೇರ್-ಮೈಕಲ್ ತಗ್ಗು ನೆಲ-ಇವುಗಳ ನಡುವೆ ಇದೆ. 
ಜಬಲ್‍ಪುರದ ಒಂದು ಉಪನಗರವಾಗಿರುವ ಗಢ ಎಂಬುದು 14ನೆಯ ಶತಮಾನದಲ್ಲಿ ಹುಟ್ಟಿಕೊಂಡ ನಾಲ್ಕು ಗೋಂಡ್ ರಾಜ್ಯಗಳಲ್ಲಿ ಒಂದರ ಮುಖ್ಯ ಪಟ್ಟಣವಾಗಿತ್ತು. ಬ್ರಿಟಿಷರ ಆಡಳಿತದ ಕಾಲದಲ್ಲಿ ನರ್ಮದಾ ಪ್ರದೇಶದ ಕಮಿಷನರ ಆಡಳಿತ ಕೇಂದ್ರವಾಗಿ ಇದರ ಪ್ರಾಮುಖ್ಯ ಅಧಿಕವಾಯಿತು. ಈಗ ಇದು ಜಬಲ್‍ಪುರ ಜಿಲ್ಲೆ ಮತ್ತು ವಿಭಾಗಗಳ ಆಡಳಿತ ಕೇಂದ್ರ.  ಜಿಲ್ಲಾ ಮತ್ತು ವಿಭಾಗಾಧಿಕಾರಿಗಳ ಕಚೇರಿಗಳ ಜೊತೆಗೆ ಇಲ್ಲಿ ಉಚ್ಚ ನ್ಯಾಯಾಲಯವೂ ವಿಶ್ವವಿದ್ಯಾಲಯವೂ ಅದರಿಂದ ಮನ್ನಣೆ ಪಡೆದ ಕಾಲೇಜುಗಳೂ ಇವೆ. ಇದು ಒಂದು ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರ ಕೂಡ. ಕೇಂದ್ರದ ಫಿರಂಗಿ ಗಾಡಿ ಕಾರ್ಖಾನೆ, ಆರ್ಡ್‍ನೆನ್ಸ್ ಕಾರ್ಖಾನೆ, ಸೈನ್ಯ ಇಲಾಖೆಯ ವರ್ಕ್‍ಷಾಪ್, ಎಣ್ಣೆ ಮತ್ತು ಹಿಟ್ಟಿನ ಗಿರಣಿಗಳು, ಮರ ಕೊಯ್ಯುವ ಕಾರ್ಖಾನೆ, ಬೀಡಿ ತಯಾರಿಕೆ, ಎಂಜಿನಿಯರಿಂಗ್ ಮತ್ತು ಗಾಜು ಕೆಲಸ, ಬಟ್ಟೆ ನೆಯ್ಗೆ - ಇವು ಕೆಲವು ಮುಖ್ಯ ಕೈಗಾರಿಕೆಗಳು.

	ಜಬಲ್‍ಪುರ ಜಿಲ್ಲೆಯ ವಿಸ್ತೀರ್ಣ 3.918 ಚ.ಮೈ. ಜನಸಂಖ್ಯೆ 16,86,030 (1971). ಪೂರ್ವ ಈಶಾನ್ಯಗಳಲ್ಲಿ ಸೋನ್ ನದೀ ಕಣಿವೆಯ ಭಾಗಗಳನ್ನೂ ವಾಯವ್ಯದಲ್ಲಿ ಸೋನ್-ಕೇನ್-ನರ್ಮದಾ ನದಿಗಳ ಶಿರಃ ಪ್ರದೇಶವನ್ನೂ ಈ ಜಿಲ್ಲೆ ಒಳಗೊಂಡಿದೆ. ನರ್ಮದಾ ನದೀ ಕಣಿವೆ ಪ್ರದೇಶದ ಪಶ್ಚಿಮ ಭಾಗ ಮಧ್ಯ ಪ್ರದೇಶದ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲೊಂದು. ಅಲ್ಲಿಯದು ಕಪ್ಪು ಮಣ್ಣು. ಗೋದಿ ಅಲ್ಲಿಯ ಮುಖ್ಯ ಬೆಳೆ. ಜಿಲ್ಲೆಯ ದಕ್ಷಿಣ ಮತ್ತು ಪೂರ್ವ ಭಾಗಗಳು ಡೆಕ್ಕನ್ ಟ್ರ್ಯಾಪ್ ಶಿಲಾಭೂಯಿಷ್ಠ ಪ್ರದೇಶ. ಉತ್ತರ ಭಾಗದಲ್ಲಿ ಸ್ಲೇಟ್, ಕ್ವಾರ್ಟ್‍ಜೈಟ್, ಸುಣ್ಣಕಲ್ಲು, ಜ್ಯಾಸ್ಪರ್ ಮತ್ತು ಅಭ್ರಕೀಯ ಹೆಮಟೈಟ್ ಶಿಲೆಗಳಿವೆ. ಇವುಗಳಲ್ಲಿ ಕಬ್ಬಿಣ ಅದುರು, ಮ್ಯಾಂಗನೀಸ್, ಸೀಸ ಮತ್ತು ತಾಮ್ರ ನಿಕ್ಷೇಪಗಳುಂಟು. ಇಟ್ಟಿಗೆ, ಮಡಕೆ ಮತ್ತು ಗಾಜಿನ ಪದಾರ್ಥ ತಯಾರಿಸಲು ಉಪಯುಕ್ತವಾದ ಮಣ್ಣುಗಳೂ ಇವೆ.

	ಭೇಡಾಘಾಟ್ ಬಳಿಯಲ್ಲಿ ನರ್ಮದಾ ನದಿ 50 ಎತ್ತರದಿಂದ ಧುಮುಕಿ ಅಲ್ಲಿಂದ ಮುಂದೆ ಅಮೃತಶಿಲಾ ಕಂದವೊಂದರಲ್ಲಿ ಹರಿಯುತ್ತದೆ. ಈ ಸ್ಥಳ ಪ್ರವಾಸಿಗಳನ್ನು ಆಕರ್ಷಿಸುತ್ತದೆ.

	ಜಿಲ್ಲೆಯ ಒಟ್ಟು ನೆಲದಲ್ಲಿ ಶೇ. 41ರಷ್ಟು ಭಾಗ ಕೃಷಿಯೋಗ್ಯ. ಶೇ. 21ರಷ್ಟು ನೆಲ ಅರಣ್ಯಾವೃತ. ಮುಖ್ಯ ಬೆಳೆಗಳು ಗೋದಿ, ಬತ್ತ, ಜೋಳ, ಎಣ್ಣೆಬೀಜ. ಸಿಮೆಂಟ್, ಕುಂಭ ವಸ್ತು, ಬಟ್ಟೆ ನೇಯ್ಗೆ, ಆಟಿಗೆ, ಹಿತ್ತಾಳೆ ಪದಾರ್ಥಗಳು ತಯಾರಾಗುತ್ತವೆ. ಕಟ್ನಿ ಮತ್ತು ಕೈಮೂರ್ ಸಿಮೆಂಟ್ ತಯಾರಿಕಾ ಕೇಂದ್ರಗಳು. ಕಲ್ಲುಗಳನ್ನು ಕಡೆಯುವುದೂ ಒಂದು ಉದ್ಯಮ.

	ಜಬಲ್‍ಪುರ ಮತ್ತು ಜಬಲ್‍ಪುರ ಕಂಟೋನ್ಮೆಂಟ್ (50.195) ಅಲ್ಲದೆ ಜಿಲ್ಲೆಯ ಇತರ ಪಟ್ಟಣಗಳು ಕಟ್ನಿ (ಮುಡ್ ವಾರಾ) (62.636) (1971). ಖಮರಿಯಾ (42.169) ಸಿಹೋರಾ (18.385) ಕೈಮೂರ್ (14.821) ಟಕೂರಿ (13.359) ಪಾನಗಢ (11,812) ಕಟಂಗಿ (9.639) ಮತ್ತು ಪಾಟಣ್ (7.517).

	ಜಬಲ್‍ಪುರ ವಿಭಾಗದಲ್ಲಿ ಜಬಲ್‍ಪುರ (16.86.030) ಬಾಲಾಘಾಟ್ (9.77.583) ವಿಂದ್‍ವಾಡಾ (9.89.413) ಸಿವನಿ (6,68,352) ಸಾಗರ್ (10,62,291) ಮಂಡಲ್ (8,73,577) ದಮೋಹ್ (5,73,263) ಮತ್ತು ನರಸಿಂಹಪುರ (5,19,270) ಜಿಲ್ಲೆಗಳಿವೆ. ಜಬಲ್‍ಪುರ ವಿಭಾಗದ ವಿಸ್ತೀರ್ಣ 29,329 ಚ.ಮೈ.                       *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ